ಕೇಂಬ್ರಿಜ್ 1 

	ಇಂಗ್ಲೆಂಡಿನ ಕೇಂಬ್ರಿಜ್‍ಷೈರ್ ಕೌಂಟಿಯ ಮುಖ್ಯ ಪಟ್ಟಣ; ವಿಶ್ವವಿದ್ಯಾಲಯ ಕೇಂದ್ರ; ಪಾರ್ಲಿಮೆಂಟರಿ ಕ್ಷೇತ್ರ. ಲಂಡನ್ನಿನ ಈಶಾನ್ಯಕ್ಕೆ 56 ಮೈ. ಮತ್ತು ಆಕ್ಸ್‍ಫರ್ಡಿನ ಈಶಾನ್ಯಕ್ಕೆ 80 ಮೈ. ದೂರದಲ್ಲಿರುವ ಈ ನಗರ ಜವುಗಿನಿಂದ ಕೂಡಿದ ಮೈದಾನದಲ್ಲಿ, ಸಮುದ್ರಮಟ್ಟಕ್ಕೆ 20'-80' ಎತ್ತರದಲ್ಲಿದೆ. ವಿಶ್ವವಿದ್ಯಾಲಯದ ನಿವಾಸಿಗಳೂ ಸೇರಿದಂತೆ ಇಲ್ಲಿಯ ಜನಸಂಖ್ಯೆ 95,358 (1961). ಊಜ್ ನದಿಯ ಉಪನದಿಯಾದ ಕೇಮ್‍ಗೆ ಪೂರ್ವದಡದಲ್ಲಿ ಈ ನಗರದ ಬಹುಭಾಗ ಹಬ್ಬಿದೆ. ನದಿಯ ಇನ್ನೊಂದು ದಡವನ್ನೂ ಇದರ ಉಪನಗರಗಳು ಆವರಿಸಿವೆಯಾದರೂ ಪಶ್ಚಿಮದ ವಿಸ್ತರಣ ಬಹಳ ಮಟ್ಟಿಗೆ ವಿಶ್ವವಿದ್ಯಾಲಯಕ್ಕೇ ಮೀಸಲಾಗಿದೆ. ದಕ್ಷಿಣದಲ್ಲಿ ಸುಣ್ಣಕಲ್ಲಿನ ಮತ್ತು ಪಶ್ಚಿಮದಲ್ಲಿ ಜೇಡಿಮಣ್ಣಿನ ಗುಡ್ಡಗಳ ಸಾಲುಗಳಿವೆ. ಇಂಗ್ಲೆಂಡಿನ ನಿಜವಾದ ವಿಶ್ವವಿದ್ಯಾಲಯನಗರವೆಂದರೆ ಆಧುನಿಕ ಕೇಂಬ್ರಿಜ್ ಒಂದೇ ಎಂದು ಬಣ್ಣಿಸಲಾಗಿದೆ. ಇಲ್ಲಿ 15ರಿಂದ 19ನೆಯ ಶತಮಾನಗಳ ನಡುವೆ ಕಟ್ಟಿದ ಬೃಹದ್ ಚರ್ಚ್‍ಗಳು ಮತ್ತು ಸೌಧಗಳಿವೆ. ವಾಸ್ತುಶಿಲ್ಪದ ಈ ಹಲವಾರು ಮಾದರಿಗಳು ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ಕಾರ್ಪಸ್ ಕ್ರಿಸ್ಟಿ ಭವನ, ಪೀಟರ್‍ಹೌಸ್‍ನ ಸಂಘ ಭವನ, ಕ್ವೀನ್ಸ್ ಕಾಲೇಜಿನ ಅಧ್ಯಕ್ಷಗೃಹ, ಕ್ಲೇರ್ ಮಂದಿರ, ಕಿಂಗ್ಸ್ ಕಾಲೇಜ್ ಕಟ್ಟಡ, ಟ್ರಿನಿಟಿ ಕಾಲೇಜ್ ಭವನ ಮುಂತಾದವೂ ಅಲ್ಲಲ್ಲಿ ತೆರವಾದ ಹಸುರು ಬಯಲುಗಳೂ ಸಸ್ಯಶಾಸ್ತ್ರಕ ಉದ್ಯಾನವೂ ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ಇಲ್ಲಿ ಅನೇಕ ಸುಂದರ ಸೇತುವೆಗಳು ಕಂಗೊಳಿಸುತ್ತವೆ. ಕೇಂ ನದಿಯ ಪೂರ್ವಭಾಗದಲ್ಲಿರುವ ಕಿಂಗ್ಸ್ ಕಾಲೇಜಿಗೆ ಅಭಿಮುಖವಾಗಿ ಮನಸೆಳೆಯುವ ಮಳಿಗೆಗೆಳ ಸಾಲುಗಳುಂಟು. ಕಿಂಗ್ಸ್ ಕಾಲೇಜಿನ ಆರಾಧನ ಮಂದಿರ (1446-1515) ಒಂದು ಪ್ರಖ್ಯಾತ ಕಟ್ಟಡ. ಇದು ಆರನೆಯ ಹೆನ್ರಿಯ ಕಾಲದಲ್ಲಿ ರೂಪುಗೊಂಡು ಇಂಗ್ಲೆಂಡಿನ ಮಧ್ಯಯುಗದ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಈ ಚರ್ಚಿನ ದೊಡ್ಡದೊಡ್ಡ ಒತ್ತು ಗೋಡೆಗಳು, ಉನ್ನತ ಶಿಖರಗಳು, ಅವುಗಳ ಮೇಲಿನ ಅಲಂಕಾರಯುತ ಬುರುಜುಗಳು, ವರ್ಣರಂಜಿತ ಚಿತ್ರಕಲೆಯಿಂದ ಕೂಡಿದ ಗಾಜಿನ ಕಿಟಕಿಗಳು ಅದ್ಭುತವಾಗಿವೆ. 

	ಸೇಂಟ್ ಬೆನೆಟ್ ಚರ್ಚ್, ಸೇಂಟ್ ಸೆಪಲ್ಕರ್ ಚರ್ಚ್ ಮುಂತಾದ ಅನೇಕ ಪ್ರಸಿದ್ಧ ಚರ್ಚುಗಳು ಇಲ್ಲಿವೆ. 19ನೆಯ ಶತಮಾನದಲ್ಲಿ ಸ್ಥಾಪಿತವಾದ ಫಿಟ್‍ಜ್‍ವಿಲಿಯಂ ವಸ್ತುಸಂಗ್ರಹಾಲಯ, ಎರಡನೆಯ ಮಹಾಯುದ್ಧಾನಂತರ ನಿರ್ಮಿತವಾದ ಎಂಜಿನಿಯರಿಂಗ್ ಪ್ರಯೋಗಾಲಯ, ಸ್ಕಾಟ್ ಧ್ರುವೀಯ ಸಂಶೋಧನಾಲಯ, ರಸಾಯನಶಾಸ್ತ್ರ ಪ್ರಯೋಗಾಲಯ, ಇವು ಇತರ ಕೆಲವು ಮುಖ್ಯ ಭವನಗಳು. ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡ ಕೇಂ ನದಿಗೆ ಪಶ್ಚಿಮದಲ್ಲಿದೆ. ಮ್ಯಾಗ್ಡಲೀನ್ ಕಾಲೇಜಿನ ಬಳಿ ಜನಪದ ವಸ್ತು ಸಂಗ್ರಹಾಲಯವಿದೆ.

	ಕೇಂಬ್ರಿಜ್‍ಗೆ ಲಂಡನ್ ಮತ್ತು ಇತರ ಸ್ಥಳಗಳೊಂದಿಗೆ ಒಳ್ಳೆಯ ಸಾರಿಗೆ ಸಂಪರ್ಕವಿದೆ. ದೋಣಿ ವಿಹಾರ, ದೋಣಿ ಸ್ಫರ್ಧೆ, ತೋಡುದೋಣಿ ಸಂಚಾರ ಮುಂತಾದವಕ್ಕೆ ಕೇಂ ನದಿಯನ್ನು ಉಪಯೋಗಿಸಿಕೊಳ್ಳಲಾಗಿದೆ. ದೊಡ್ಡ ಯಾನಗಳಿಗಾಗಿ ಬಾಡಿಗೆಗೆ ನಾವೆಗಳೂ ದೊರಕುತ್ತವೆ. ಇಲ್ಲೊಂದು ಚಿಕ್ಕ ವಿಮಾನ ನಿಲ್ದಾಣವೂ ವಿಮಾನ ಶಿಕ್ಷಣಶಾಲೆಯೂ ಉಂಟು.

	ಇಲ್ಲಿ ವ್ಯಾಪಕವಾಗಿ ಕೈಗಾರಿಕೆ ಬೆಳೆದಿದ್ದರೂ ನಗರಮಧ್ಯದಿಂದ ಬಲು ದೂರ ಚಾಚಿಲ್ಲ. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ, ಅದರ ಬೇಡಿಕೆಗಳನ್ನು ಪೂರೈಸುವ ಕೈಗಾರಿಕೆಗಳೇ ಹೆಚ್ಚು. ಕಟ್ಟಡ, ಮುದ್ರಣ, ಉಪಕರಣ, ರೇಡಿಯೊ ಎಲೆಕ್ಟ್ರಾನಿಕ್ಸ್, ಹಿಟ್ಟುಗಿರಣಿ, ಆಸ್ಫಾಲ್ಟ್-ಇವು ಇಲ್ಲಿಯ ಕೆಲವು ಕೈಗಾರಿಕೆಗಳು. ಅಂತರರಾಷ್ಟ್ರೀಯ ಖ್ಯಾತಿಯ, ಹೊಸ ಹಳೆಯ ಪುಸ್ತಕಗಳ ಮತ್ತು ಪುರಾತನ ವಸ್ತುಗಳ ಅಂಗಡಿಗಳೂ ಇಲ್ಲುಂಟು.

	ಕೇಂಬ್ರಿಜ್‍ನ ಅತ್ಯಂತ ಪುರಾತನ ವಸತಿ ಇದ್ದದ್ದು ಬಹುಶ: ಕೇಂ ನದಿಯ ಮೇಲೆ, ಸಮುದ್ರಕ್ಕೆ ಅತ್ಯಂತ ಹತ್ತಿರದಲ್ಲಿ, ಮಿಡ್ಲೆಂಡ್ಸ್‍ನ ಒಣ ನೆಲದಿಂದ ಪೂರ್ವದ ಒಣನೆಲಕ್ಕೆ ದಾಟಲು ಸಾಧ್ಯವಿದ್ದ ಸ್ಥಳದಲ್ಲಿ. ಈ ಎಡೆಯಲ್ಲಿ ಬಹಳ ಹಿಂದಿನಿಂದಲೂ ಒಂದು ಸೇತುವೆ ಇದೆ. ಸೇತುವೆಯ ಹೆಸರನ್ನು ಪಡೆದಿರುವ ಕೌಂಟಿ ಇಂಗ್ಲೆಂಡಿನಲ್ಲಿ ಕೇಂಬ್ರಿಜ್ ಒಂದೇ. ಅತ್ಯಂತ ಪ್ರಾಚೀನ ಕೇಂದ್ರವೊಂದರ ಸುತ್ತ ನಿರ್ಮಿತವಾದ ಆಧುನಿಕ ನಗರದ ಎಲ್ಲ ಸಮಸ್ಯೆಗಳೂ ಕೇಂಬ್ರಿಜಿನಲ್ಲಿವೆ. ಸಾರಿಗೆ ಮತ್ತು ವಸತಿ ಸಮಸ್ಯೆಗಳನ್ನು ಪರಿಹರಿಸಲು ಸಮಗ್ರವಾದ ಯೋಜನೆಯೊಂದು ಜಾರಿಗೆ ಬಂದಿದೆ.							

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ